themap.katib.in

ಯುದ್ಧದ ಬೂದಿಯಲ್ಲಿ ಬದುಕು ಹುಡುಕುವ ಗಾಜಾ….!

ಗಾಜಾ ಎಂಬುದು ಪ್ಯಾಲೆಸ್ಟೈನ್‌ನ ಆ ಪುಟ್ಟ ಪ್ರದೇಶದ ಹೆಸರು. ಇಂದಿನ ವಿಶ್ವದ ಹೃದಯಕ್ಕೆ ಕಣ್ಣೀರು ತರಿಸುವಂತಾಗಿದೆ. ಅನೇಕ ದಶಕಗಳಿಂದ ನಿರಂತರ ಯುದ್ಧ, ಧ್ವಂಸ ಮತ್ತು ನೋವಿನ ಸಂಕೇತವಾಗಿ ಗಾಜಾ ಪರಿವರ್ತಿತವಾಗಿದೆ. ಅಲ್ಲಿನ ಜನರ ಬದುಕು ಎಂದರೆ ಪ್ರತಿ ದಿನದ ಹೋರಾಟ, ಪ್ರತಿ ರಾತ್ರಿ ಭಯದ ನಿದ್ದೆ, ಮತ್ತು ಪ್ರತಿ ಬೆಳಿಗ್ಗೆ ಹೊಸ ಆಶೆಯ ಹುಡುಕಾಟ. ಬಾಂಬ್‌ಗಳ ಧ್ವನಿಯ ಮಧ್ಯೆ ಜನರು ಬದುಕಿನ ಅರ್ಥವನ್ನು ಹುಡುಕುತ್ತಿದ್ದಾರೆ. ಯುದ್ಧದ ಬೂದಿಯೊಳಗೆ ಬದುಕು ಹುಡುಕುವ ಈ ಜನರ ಕಥೆ ಕೇವಲ ರಾಜಕೀಯದ ಕಥೆಯಲ್ಲ, ಅದು ಮಾನವೀಯತೆಯ ಪರೀಕ್ಷೆಯ ಕಥೆಯಾಗಿದೆ.

ಗಾಜಾದ ಬೀದಿಗಳು ಒಮ್ಮೆ ಮಕ್ಕಳ ನಗು ಮತ್ತು ವ್ಯಾಪಾರದ ಚಟುವಟಿಕೆಯಿಂದ ತುಂಬಿದ್ದುವು. ಆದರೆ ಈಗ ಅವುಗಳ ಬದಲಿಗೆ ಕೇವಲ ಧೂಳು, ಬೂದಿ ಮತ್ತು ಸ್ಫೋಟದ ಶಬ್ದಗಳು ಮಾತ್ರ. ಮನೆಗಳು ಧ್ವಂಸಗೊಂಡಿವೆ, ಆಸ್ಪತ್ರೆಗಳು ಬಾಂಬ್‌ನ ಗುರಿಯಾಗಿವೆ, ಶಾಲೆಗಳು ಅವಶೇಷಗಳಾಗಿ ಉಳಿದಿವೆ, ಬದುಕು ಅಲ್ಲಿ ಪ್ರತಿ ಕ್ಷಣ ಅಪಾಯದ ಅಂಚಿನಲ್ಲಿದೆ. ವಿದ್ಯುತ್, ನೀರು, ಔಷಧಿ ಇವುಗಳ ಕೊರತೆಯೂ ದಿನನಿತ್ಯದ ಭಾಗವಾಗಿದೆ.ಆದರೆ ಈ ಎಲ್ಲ ಕಷ್ಟಗಳ ನಡುವೆಯೂ ಗಾಜಾದ ಜನರು ತಲೆ ಬಾಗಿಲ್ಲ. ಅವರು ಬಾಧೆಯನ್ನು ಸಹಿಸಿಕೊಂಡು ಬದುಕು ಮುಂದುವರಿಸುತ್ತಿದ್ದಾರೆ. ಆ ಪುಟ್ಟ ನೆಲದಲ್ಲಿ ಬದುಕು ಉಳಿಸಲು ಅವರ ಹೋರಾಟ ಜಗತ್ತಿನ ಅತ್ಯಂತ ಶೌರ್ಯಮಯ ಹೋರಾಟಗಳಲ್ಲಿ ಒಂದಾಗಿದೆ.

ಗಾಜಾದ ಜನರ ಹೃದಯದಲ್ಲಿ ಅತಿ ದೊಡ್ಡ ಶಕ್ತಿ ಎಂದರೆ ಅವರ ‘ಇಮಾನ್’ ಆಲ್ಲಾಹನ ಮೇಲಿನ ನಂಬಿಕೆ. ಅವರ ನಂಬಿಕೆ ಬಾಂಬ್‌ಗಳ ಶಬ್ದಕ್ಕೂ ಮೀರಿ ಬಲಿಷ್ಠವಾಗಿದೆ. ಅವರು ಪ್ರತಿ ದಿನ ಪ್ರಾರ್ಥಿಸುತ್ತಾರೆ “ಯಾ ಅಲ್ಲಾಹ್, ನಮಗೆ ಶಾಂತಿ ಕೊಡು.” ಈ ಪ್ರಾರ್ಥನೆಗಳು ಕೇವಲ ಧಾರ್ಮಿಕ ಕೃತ್ಯಗಳಲ್ಲ; ಅವು ಅವರ ಬದುಕಿನ ಉಸಿರುಗಳಾಗಿವೆ.
ತಾಯಿ ತನ್ನ ಮಗುವನ್ನು ತೋಳಲ್ಲಿ ಹಿಡಿದುಕೊಂಡು ಮಸೀದಿಯ ಮುಂದೆ ನಿಂತು ಪ್ರಾರ್ಥಿಸುತ್ತಾಳೆ. ಆಕೆಯ ಕಣ್ಣೀರು ದುಃಖದ ಚಿಹ್ನೆಯಾಗಿದ್ದರೂ, ಅದರೊಳಗೆ ನಂಬಿಕೆಯ ಬಲವೂ ಇದೆ. ಮಕ್ಕಳು ಬಾಂಬ್‌ಗಳ ಧ್ವನಿಯ ಮಧ್ಯೆಯೂ ಕುರ್‌ಆನ್ ಪಾಠಿಸುತ್ತಾರೆ. ಅವರು ನಂಬುತ್ತಾರೆ – “ಈ ನೋವಿನ ನಂತರ ಶಾಂತಿ ಬರುವುದು ಆಲ್ಲಾಹನ ವಾಗ್ದಾನ.”ಎಂದು ನಂಬಿಕೆಯನ್ನು ಇಟ್ಟು ಬದುಕುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ಗಾಜಾದ ಜನರು ಕೇವಲ ಬದುಕು ಉಳಿಸಿಕೊಂಡಿಲ್ಲ, ಧ್ವಂಸವಾದ ಕಟ್ಟಡಗಳ ಮಧ್ಯೆ ಜನರು ಪರಸ್ಪರ ನೆರವಾಗುತ್ತಿದ್ದಾರೆ. ತಮ್ಮ ಬಳಿ ಇರುವ ಸ್ವಲ್ಪ ಆಹಾರವನ್ನು ಹಂಚಿಕೊಳ್ಳುತ್ತಿದ್ದಾರೆ, ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾರೆ, ಅನಾಥ ಮಕ್ಕಳಿಗೆ ಆಶ್ರಯ ನೀಡುತ್ತಿದ್ದಾರೆ. ಯುದ್ಧವು ಮಾನವೀಯತೆಯನ್ನು ನಾಶಮಾಡಲು ಪ್ರಯತ್ನಿಸಬಹುದು, ಆದರೆ ಅದು ಸಂಪೂರ್ಣವಾಗಿ ನಾಶಮಾಡಲಾರದು. ಗಾಜಾದ ಜನರ ಹೃದಯಗಳಲ್ಲಿ ಇನ್ನೂ ದಯೆ, ಪ್ರೀತಿ, ಸಹಕಾರ ಇವೆ.
ನಮಗೆ ನೋಡುವುದಾದರೆ ಗಾಜಾದ ಮಹಿಳೆಯರು ಈ ಹೋರಾಟದ ನಿಜವಾದ ವೀರರು. ತಮ್ಮ ಪತಿಯನ್ನೋ, ಮಕ್ಕಳನ್ನೋ ಕಳೆದುಕೊಂಡರೂ ಅವರು ದುಃಖವನ್ನು ಮೌನವಾಗಿ ಹೊತ್ತು ಬದುಕು ಸಾಗಿಸುತ್ತಾರೆ. ಅವರು ತಮ್ಮ ಕುಟುಂಬಕ್ಕೆ ಧೈರ್ಯ ತುಂಬುತ್ತಾರೆ, ತಮ್ಮ ಮಕ್ಕಳಿಗೆ “ನಂಬಿಕೆ ಕಳೆದುಕೊಳ್ಳಬೇಡ” ಎಂದು ಬೋಧಿಸುತ್ತಾರೆ.
ಅವರ ಪ್ರಾರ್ಥನೆಗಳು ಮೌನವಾದರೂ ಪ್ರಬಲವಾದವು. ಅವರ ಕಣ್ಣೀರು ಬಲಹೀನತೆಯ ಚಿಹ್ನೆಯಲ್ಲ, ಅದು ಆಂತರಿಕ ಶಕ್ತಿಯ ಸಂಕೇತ. ಅವರು ಜೀವನದ ಅರ್ಥವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದಾರೆ ಶೂನ್ಯದಿಂದ, ಬೂದಿಯಿಂದ, ನೋವಿನಿಂದ.

ಅದೇರೀತಿಯಲ್ಲಿ ಗಾಜಾದ ಈ ದುಃಖವನ್ನು ಪ್ರಪಂಚ ನೋಡುತ್ತದೆ, ಆದರೆ ಹೆಚ್ಚುಮಂದಿ ಮೌನದಲ್ಲೇ ಇರುತ್ತಾರೆ. ಸುದ್ದಿ ಮಾಧ್ಯಮಗಳಲ್ಲಿ ಕೆಲವು ಕ್ಷಣ ಮಾತ್ರ ಈ ಘಟನೆಗಳು ಪ್ರಸಾರವಾಗುತ್ತವೆ, ನಂತರ ಮತ್ತೆ ಮರೆಮಾಡಲ್ಪಡುತ್ತವೆ. ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡುವ ರಾಷ್ಟ್ರಗಳು ಇಲ್ಲಿ ಕಣ್ಣನ್ನು ಮುಚ್ಚುತ್ತವೆ. ಆದರೆ, ಈ ಮೌನ ಗಾಜಾದ ಜನರ ಧೈರ್ಯವನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಪ್ರಪಂಚ ಮೌನವಾಗಿದ್ದರೂ, ಅವರ ಕಂಠಧ್ವನಿ ಇನ್ನೂ ಜೀವಂತವಾಗಿದೆ. ಅವರ ಕಥೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದ ಜನರ ಹೃದಯ ತಟ್ಟುತ್ತಿವೆ. ಸಾವಿರಾರು ಜನರು ಗಾಜಾದ ಪರವಾಗಿ ಪ್ರಾರ್ಥಿಸುತ್ತಿದ್ದಾರೆ, ಸಹಾಯದ ಕೈ ಚಾಚುತ್ತಿದ್ದಾರೆ.
ಒಬ್ಬ ಬಾಲಕನ ಕಥೆಯು ಜನರ ಕಣ್ಣೀರು ತರಿಸುತ್ತದೆ. ಅವನ ತಂದೆ ಯುದ್ಧದಲ್ಲಿ ಮೃತಪಟ್ಟಿದ್ದರೂ, ಅವನು ಹೇಳಿದ್ದ “ನಾನು ವೈದ್ಯನಾಗುತ್ತೇನೆ. ನನ್ನ ದೇಶಕ್ಕೆ ಜೀವ ಕೊಡುವೆ.” ಇಂತಹ ಕಥೆಗಳು ಗಾಜಾದ ನಿಜವಾದ ಚಿತ್ರ. ಯುದ್ಧವು ಅವರ ಮನಸ್ಸುಗಳನ್ನು ಮುರಿದಿಲ್ಲ; ಅದು ಅವರನ್ನು ಇನ್ನಷ್ಟು ಬಲಿಷ್ಠರನ್ನಾಗಿಸಿದೆ.

ಇಸ್ಲಾಮ್ ಧರ್ಮವು ಹೇಳುವುದು “ಪ್ರತಿ ಕಷ್ಟದ ನಂತರ ಸುಲಭತೆ ಬರುತ್ತದೆ” (ಕುರ್‌ಆನ್, 94:6). ಗಾಜಾದ ಜನರು ಈ ವಾಕ್ಯವನ್ನು ತಮ್ಮ ಬದುಕಿನ ಸತ್ಯವನ್ನಾಗಿ ಮಾಡಿಕೊಂಡಿದ್ದಾರೆ. ಅವರು ನಂಬುತ್ತಾರೆ, ಈ ಕತ್ತಲೆಯ ನಂತರ ಬೆಳಕು ಬರುವುದು ಖಚಿತ. ಈ ನಂಬಿಕೆಯೇ ಅವರ ಉಸಿರು, ಅವರ ಬದುಕಿನ ಶಕ್ತಿ. ಯುದ್ಧದ ಕತ್ತಲೆಯಲ್ಲಿಯೂ ಅವರು ಪ್ರಾರ್ಥನೆ ಮಾಡುತ್ತಾರೆ, ದಾನ ಮಾಡುತ್ತಾರೆ, ಪರಸ್ಪರ ಸಹಾಯ ಮಾಡುತ್ತಾರೆ. ಈ ನಂಬಿಕೆಯ ಶಕ್ತಿ ಅವರನ್ನು ಉಳಿಸಿದೆ. ಅವರು ನಂಬಿಕೆ ಕಳೆದುಕೊಂಡಿದ್ದರೆ, ಗಾಜಾ ಬಹುಕಾಲದ ಹಿಂದೆ ಮೌನವಾಗುತ್ತಿತ್ತು.

ಗಾಜಾದ ನೆನಪು ನಮಗೆ ಒಂದು ದೊಡ್ಡ ಪಾಠ ಕಲಿಸುತ್ತದೆ ಯುದ್ಧವು ಯಾವತ್ತೂ ಪರಿಹಾರವಲ್ಲ. ಧ್ವಂಸದಿಂದ ಶಾಂತಿ ಹುಟ್ಟುವುದಿಲ್ಲ. ಗಾಜಾದ ಜನರ ನೋವು ಪ್ರಪಂಚದ ಪ್ರತಿಯೊಂದು ರಾಷ್ಟ್ರಕ್ಕೆ ಎಚ್ಚರಿಕೆಯ ಗಂಟೆ. ಮಾನವತೆ ಯಾವ ರಾಜಕೀಯಕ್ಕಿಂತ ದೊಡ್ಡದು ಎಂಬುದನ್ನು ಈ ಜನರು ತಮ್ಮ ಜೀವದಿಂದ ಸಾಬೀತುಪಡಿಸಿದ್ದಾರೆ.
ಗಾಜಾದ ನೋವು ನಮಗೆ ಸಹಾನುಭೂತಿ ಕಲಿಸುತ್ತದೆ, ಪ್ರಾರ್ಥನೆಗೆ ಅರ್ಥ ಕೊಡುತ್ತದೆ, ಶಾಂತಿಯ ಮೌಲ್ಯವನ್ನು ನೆನಪಿಸುತ್ತದೆ. ಈ ನೆಲದ ಪ್ರತಿಯೊಂದು ಕಲ್ಲು, ಪ್ರತಿಯೊಂದು ಧೂಳು ಹನಿಯೂ ನಮಗೆ ಹೇಳುತ್ತದೆ “ಯುದ್ಧ ನಿಲ್ಲಬೇಕು, ಮಾನವತೆ ಉಳಿಯಬೇಕು.”
ನಮಗೂ ಕೂಡ ಗಾಜಾದ ಪರವಾಗಿ ಎಲ್ಲಾ ಸಮಯದಲ್ಲೂ ಪ್ರಾರ್ಥನೆ ನಡೆಸೋಣ.

-ತಬ್ಶೀರ್ ಕುಂಜಿಲ