೧೬೦೦ ವರ್ಷಗಳ ಮುಂಚೆ, ಜಗದಲ್ಲಿ ಅಕ್ರಮ ಹಾಗೂ ಅರಾಜಕತೆಯು ತಾಂಡವವಾಡುತ್ತಿದ್ದ ಆ ಕಾಲದಲ್ಲಿ ಪ್ರಪಂಚದಲ್ಲಿ ನೀತಿ ಹಾಗೂ ಸಮಾನತೆಯ ಪಾಠವನ್ನು ತಿಳಿಹೇಳುತ್ತಾ ಆ ಕತ್ತಲೆಯನ್ನು ಹೋಗಲಾಡಿಸಲು ಮಕ್ಕಾದಲ್ಲಿ ಪ್ರವಾದಿ ಮುಹಮ್ಮದ್ ﷺ ರವರು ಜನ್ಮತಾಳಿದರು. ಅವರ ಬದುಕು ಎಲ್ಲರ ಹಾಗೆ ಅನೇಕಾನೇಕ ಘಟನೆಗಳು ಮಾತ್ರವಾಗಿರದೇ ಮಾನವತೆಯ ಜ್ಯೋತಿಯಾಗಿದ್ದರು. ಮಿಲಾದು ನ್ನಬಿ ಎಂಬುವುದು ಕೇವಲ ಅವರ ಜನ್ಮದಿನ ಎನ್ನುವುದಕ್ಕೆ ಮಿಗಿಲಾಗಿ ಸಹಸ್ರಾರು ವರ್ಷಗಳ ಹಿಂದೆ ನಮ್ಮನ್ನು ಸತ್ಯಮಾರ್ಗದಲ್ಲಿ ನಡೆಸಿದ ವಿಶ್ವ ನೇತಾರರ ಬಗೆಗಿನ ನೆನಪುಗಳನ್ನು ಮೆಲುಕು ಹಾಕಲಿಕ್ಕಿರುವ ಒಂದೊಳ್ಳೆಯ ಅವಕಾಶ ವೆಂದರೂ ತಪ್ಪಾಗಲಾರದು. ಮುಖ್ಯವಾಗಿ ಇಂದಿನ ಸಮಾಜಕ್ಕೆ, ನಾಯಕತ್ವ ಗುಣಗಳಿಗೆ ಪೈಗಂಬರರು ﷺ ನೀಡಿದ ಮಹತ್ವದ ಪಾಠ ಅಳವಡಿಸಿಕೊಳ್ಳಲು ಕೂಡ ಇದು ಸಹಾಯಕವಾಗುತ್ತದೆ .
1978 ರಲ್ಲಿ ಜೇಮ್ಸ್ ಮೆಕ್ ಗ್ರೆಗೊರ್ ಬರ್ನ್ಸ್ ರವರು ತಮ್ಮ ಪ್ರಖ್ಯಾತ ಪುಸ್ತಕವಾದ “ LEADERSHIP” ನಲ್ಲಿ ಪ್ರತಿಪಾದಿಸಿರುವ “ ಪರಿವರ್ತನೀಯ ನಾಯಕತ್ವದ ಗುಣ” ವು 1500 ವರ್ಷಗಳ ಮುಂಚೆಯೇ ಬದುಕಿದ್ದ ಪೈಗಂಬರರ ﷺ ಜೀವನದಲ್ಲಿ ಕಂಡುಬರುವ ಒಂದು ಸಾಮಾನ್ಯ ಸಂಗತಿಯಾಗಿದೆ. ತನ್ನ ಅನುಯಾಯಿಗಳಲ್ಲಿ ಒಂದು ನಿಶ್ಚಿತ ವಾದ ಕಾರಣಕ್ಕಾಗಿ ಸ್ವಾರ್ಥತೆಗೆ ಜಾಗವಿಲ್ಲದಂತೆ ಮಾಡುವುದಾಗಿದೆ ಪರಿವರ್ತನೀಯ ನಾಯಕತ್ವ ಗುಣ . ಪ್ರವಾದಿ ﷺ ರವರು ಇದೇ ರೀತಿ ಧನ ಹಾಗೂ ಬಲದ ಉಪಯೋಗವಿಲ್ಲದೇ ಸತ್ಯ ಮತ್ತು ನೈತಿಕತೆಯ ಮೂಲಕ ಇಸ್ಲಾಂ ಎಂಬ ಸತ್ಯಧರ್ಮವನ್ನು ಬೋಧಿಸಿ ಒಂದೊಳ್ಳೆ ನಾಯಕತ್ವ ಮಾರ್ಗವನ್ನು ತೋರಿಸಿಕೊಟ್ಟರು ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ತನ್ನ ಬೋಧನೆಗಳನ್ನು ನಿಲ್ಲಿಸಿದರೆ ಬೇಕಾದಷ್ಟು ಹಣವನ್ನು ಕೊಡುತ್ತೇವೆಂದೂ, ತಮ್ಮನ್ನು ನಮ್ಮ ನಾಯಕನನ್ನಾಗಿ ಅಥವಾ ಮಕ್ಕಾದ ರಾಜನನ್ನಾಗಿಸುತ್ತೇವೆ ಎಂದು ಖುರೈಷಿಗಳು ಹೇಳಿದಾಗಲೂ ಪ್ರವಾದಿ ﷺ ರವರು “ ಇನ್ನು ತಾವು ನನ್ನ ಒಂದು ಕೈಯಲ್ಲಿ ಸೂರ್ಯ ಹಾಗೂ ಮತ್ತೊಂದು ಕೈಯಲ್ಲಿ ಚಂದ್ರನನ್ನು ಇಡುತ್ತೀರೆಂದು ಹೇಳಿದರೂ ಕೂಡ ನನ್ನ ಈ ಒಂದು ಕರ್ತವ್ಯ ನಾನು ನಿರ್ವಹಿಸಿಯೇ ತೀರುತ್ತೇನೆ” ಎಂದು ನಿಖರವಾಗಿ ಹೇಳಿದ ಘಟನೆಯು ನಮಗೆ ತಿಳಿದೇ ಇದೆ. ಇದರಿಂದ ತನ್ನ ಆಶಯಾದರ್ಶಗಳಲ್ಲಿ ಅವರಿಗಿದ್ದ ನಿಖರತೆ ತಿಳಿಯಿತಲ್ಲದೇ ನಂತರದಲ್ಲಿ ಅಬೂಬಕರ್ (رضي الله عنه ) ರವರಂತಹಾ ಆದರ್ಶ ನಾಯಕರ ಉದಯಕ್ಕೆ ಕಾರಣವಾಯಿತು ಎಂದರೆ ತಪ್ಪಾಗುವುದಿಲ್ಲ. ಒಂದು ಕಾಲದಲ್ಲಿ ಗುಲಾಮರಾಗಿದ್ದ ಬಿಲಾಲ್ (رضي الله عنه ) ರನ್ನು ಮುಂದೆ ಜನರನ್ನೆಲ್ಲ ಅಲ್ಲಾಹನ ಆರಾಧನೆಗೆ ಕರೆಕೊಡುವ ಶಬ್ದವಾಗಿಸಿದರು. ಹೀಗೆಯೇ ಇಂದಿನ ಕಾಲದಲ್ಲಿ ಸ್ವಂತ ಸೈನ್ಯ, ಸಲಹೆಗಾರರಿದ್ದರೂ ಸಾಧಿಸಲಾಗದಂತಹ ಕಾರ್ಯಗಳನ್ನು ಪ್ರವಾದಿ ﷺ ರವರು ೧೫೦೦ ವರ್ಷಗಳ ಮುಂಚೆಯೇ ಮಾಡಿದರು.
ಇಸ್ಲಾಮಿನಲ್ಲಿ ಯಾರೂ ಕೂಡ ಮೇಲು ಕೀಳು ಎಂಬುದು ಇಲ್ಲವೆಂದೂ ಎಲ್ಲರೂ ಅಲ್ಲಾಹನ ಮುಂದೆ ಸಮಾನರು ಎಂದೂ ಪ್ರವಾದಿ ﷺ ರವರು ಸಾರಿದರು. ನಾವು ನೋಡುವುದಾದರೆ ಪ್ರವಾದಿ ﷺ ರವರು “ ಹಜ್ಜತುಲ್ ವದಾಃ” ನಲ್ಲಿ ಹೇಳಿದರು “ ಧರ್ಮನಿಷ್ಠೆ ಯಾಗಿದೆ ಒಬ್ಬರ ಸಮಾಜಿಕ ಸ್ತರವನ್ನು ನಿಶ್ಚಯಿಸುವುದು , ಅಲ್ಲದೆ ಯಾವೊಬ್ಬ ಅರಬಿ ವಂಶಜರೂ ಕೂಡ ಅರೇಬಿಯೇತರರ ಮೇಲಲ್ಲ , ಯಾವೊಬ್ಬ ಕರಿಯನೂ ಕೂಡ ಬಿಳಿಯನಿಗೆ ಕೀಳಲ್ಲ” . ಎಂಬ ಪ್ರವಾದಿ ವಚನವು ಎಲ್ಲರಿಗೂ ತಿಳಿದಿರುವಂತಹದ್ದೇ .ಮದೀನದ ಸಂವಿಧಾನದ ಪ್ರಕಾರ ಅಲ್ಲಿ ಮುಶ್ರಿಕ್ಗಳು , ಮುಸಲ್ಮಾನರು ಕೂಡ ಭಯವೇನೂ ಇಲ್ಲದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿತ್ತು. ರಕ್ತದಲ್ಲಿ ಅಲ್ಲ ನ್ಯಾಯ ಹಾಗೂ ಕರುಣೆಯ ಅಧೀನದಲ್ಲಿತ್ತು ಆಗಿನ ಆ ಒಂದು ಸಮಾಜದ ನಿರ್ಮಾಣ. ಸಮಾಜಿಕ ಸಮಾನತೆಯ ವಾತಾವರಣವು ಅಲ್ಲಿ ನಿರ್ಮಾಣವಾಗಿತ್ತು. ಖುರೈಷಿ ಪ್ರಮುಖರು ಬಂದು ತಮ್ಮ ಜೊತೆಯಿರುವ ಗುಲಾಮರಾಗಿದ್ದವರನ್ನು ಆಚೆಗೆ ಹಾಕುವುದಾದರೆ ನಾವೆಲ್ಲರೂ ನಿಮ್ಮ ಧರ್ಮವನ್ನು ಸ್ವೀಕರಿಸುತ್ತೇವೆ , ಎಂದಾಗ ಅಲ್ಲಾಹನಿಗಾಗಿ ಹಗಲಿರುಳು ಇಬಾದತ್ ಮಾಡುವವರನ್ನು ಬೇರೆಯವರಿಗಾಗಿ ನೀವು ತ್ಯಜಿಸಬೇಕಾಗಿಲ್ಲ ಎಂಬ ಆಶಯ ಬರುವ ಸೂಕ್ತದೊಂದಿಗೆ ಅಲ್ಲಾಹನು ಉತ್ತರಿಸಿದ. ಕರಿಯರು ಬಿಳಿಯರು ಆ ಜಾತಿ ಈ ಜಾತಿ ಎಂಬ ಬೇಧವಿಲ್ಲದೇ ಎಲ್ಲರೂ ಅಲ್ಲಾಹನ ಮುಂದೆ ನೆಲದಲ್ಲಿ ತಮ್ಮ ಹಣೆಗಳನ್ನು ಇಟ್ಟು ನಮಸ್ಕಾರ ಮಾಡುತ್ತಾರೆ; ಇದಾಗಿದೆ ನೈಜ ಇಸ್ಲಾಂ.
ಒಂದು ಸಮೂಹವನ್ನು ಎದುರಿಸುವಾಗ ಪ್ರವಾದಿ ﷺ ರ ಮುಖ್ಯವಾಗಿ ಎರಡು ಮನೋವಿಜ್ಞಾನದ ಪ್ರಮೇಯಗಳನ್ನು ಕಾಣಬಹುದು. ಒಂದು : ಹೇಗೆ ಸಮೂಹವನ್ನು ಕ್ರಮೇಣವಾಗಿ ದುಶ್ಚಟದಿಂದ ಬಿಡಿಸುವುದು ಎಂದಾಗಿತ್ತು. ಅಥವಾ ಇದನ್ನು [ GRADUALITY] ಕ್ರಮೀಣೀಕರಣ ಎಂದು ಹೇಳುತ್ತಾರೆ. ಅದರಲ್ಲಿ 3 ಹಂತಗಳಿದ್ದು ಮೊದಲು ಅವರ ಆಂತರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಎಂಬುದಾಗಿದೆ. ಉದಾಹರಣೆಗೆ ಮೊದಲು ಪ್ರವಾದಿ ﷺ ರವರು ಆಯತುಗಳ ಮೂಲಕ ಶರಾಬಿನ ಪರಿಣಾಮಗಳ ಕುರಿತು ಹೇಳಿಕೊಡುತ್ತಾರೆ. یَسۡـَٔلُونَكَ عَنِ ٱلۡخَمۡرِ وَٱلۡمَیۡسِرِۖ قُلۡ فِیهِمَاۤ إِثۡمࣱ كَبِیرࣱ وَمَنَـٰفِعُ لِلنَّاسِ وَإِثۡمُهُمَاۤ أَكۡبَرُ مِن نَّفۡعِهِمَاۗ ಎಂಬ ಸೂಕ್ತದಡಿಯಲ್ಲಿ ಶರಾಬಿನ ಪರಿಣಾಮದ ಬಗ್ಗೆ ಮತ್ತು ಅದರಲ್ಲಿ ಯಾವುದೇ ರೀತಿಯ ಉಪಕಾರವಿಲ್ಲವೆಂದು ಹೇಳುತ್ತಾರೆ. ಎರಡನೆಯ ಹಂತದಲ್ಲಿ ಮುಖ್ಯವಾದ ಜಾಗಗಳಿಗೆ ಹಾಗೂ ಮುಖ್ಯವಾದ ವಿಷಯಗಳನ್ನು ಮಾಡುವಾಗ ಶರಾಬನ್ನು ಕುಡಿಯಬಾರದು ಎಂದು ಹೇಳುವುದಾಗಿತ್ತು . یَـٰۤأَیُّهَا ٱلَّذِینَ ءَامَنُوا۟ لَا تَقۡرَبُوا۟ ٱلصَّلَوٰةَ وَأَنتُمۡ سُكَـٰرَىٰ ಎಂಬ ಸೂಕ್ತದೊಂದಿಗೆ ಪೂರ್ತಿಯಾಗಿ ನಿಷೇಧಿಸಿಲ್ಲವಾದರೂ ನಮಾಜನ್ನು ನಿರ್ವಹಿಸುವಾಗ ಕುಡಿಯಬಾರದು ಎಂದು ಹೇಳಲಾಯಿತು. ಮೂರನೇ ಹಂತ ಅದನ್ನು ಪೂರ್ತಿಯಾಗಿ ನಿಷೇಧಿಸುವುದು ಎಂಬುದಾಗಿದೆ .یَـٰۤأَیُّهَا ٱلَّذِینَ ءَامَنُوۤا۟ إِنَّمَا ٱلۡخَمۡرُ وَٱلۡمَیۡسِرُ وَٱلۡأَنصَابُ وَٱلۡأَزۡلَـٰمُ رِجۡسࣱ مِّنۡ عَمَلِ ٱلشَّیۡطَـٰنِ فَٱجۡتَنِبُوهُ لَعَلَّكُمۡ تُفۡلِحُونَ ಈ ಒಂದು ಸೂಕ್ತದಿಂದಾಗಿ ಶರಾಬನ್ನು ಪೂರ್ತಿಯಾಗಿ ನಿಷೇಧಿಸಲಾಯಿತು. ಹೀಗೆಯೇ ಒಂದು ಸಮಾಜದಲ್ಲಿ ಆಳವಾಗಿ ಹೂತು ಹೋಗಿದ್ದ ಒಂದು ತಪ್ಪನ್ನು ಹಂತ ಹಂತವಾಗಿ ನಿಷೇಧಿಸುತ್ತಾ ಜನಮನಸ್ಸುಗಳಲ್ಲಿ ಬೃಹತ್ ಪರಿಣಾಮ ಉಂಟುಮಾಡುವಲ್ಲಿ ಪ್ರವಾದಿ ﷺ ರವರು ವಿಜಯಿಯಾದರು.
ಚರಿತ್ರೆಯಲ್ಲಿ ಕತ್ತಲೆ ಯುಗ ವೆಂದು ಗುರುತಿಸಲ್ಪಟ್ಟ, ಹುಟ್ಟಿದ್ದು ಹೆಣ್ಣೆಂದು ತಿಳಿದರೆ ಜೀವಂತ ಹೂತುಹಾಕುತ್ತಿದ್ದ ಅಂತಹ ಒಂದು ಕಾಲದಲ್ಲಿ “ಒಂದು ಹೆಣ್ಣು ಮಗುವನ್ನು ಹೆತ್ತು ಹೊತ್ತು ಒಳ್ಳೆಯ ರೀತಿಯಲ್ಲಿ ಬೆಳೆಸಿದರೆ ನಿಮಗೆ ಸ್ವರ್ಗ ಖಂಡಿತ” ಎಂದು ಹೇಳಿ ಅವರ ಮನಸ್ಸಿನಿಂದ ಹೆಣ್ಣು ಮಗುವಿನ ಬಗೆಗಿನ ಕೀಳುಭಾವನೆಯನ್ನು ಹೋಗಲಾಡಿಸಿದರು. ತಾಯಿಯ ಪಾದದಡಿಯಲ್ಲಾಗಿದೆ ಸ್ವರ್ಗವೆಂದೂ; ಮಾತಾ ಪಿತರನ್ನು “ಚೀ” ಎಂದು ಕೂಡ ಹೇಳಬಾರದು ಎಂದೆಲ್ಲಾ ಹೇಳಿ ಅವರ ಮಹತ್ವವನ್ನು ಅವರು ತಿಳಿಸಿದರು.ತನ್ನ ನೆರೆಹೊರೆಯವನು ಹಸಿದಿರುವಾಗ ಹೊಟ್ಟೆತುಂಬಿಸುವವನು ನೈಜ ಮುಸಲ್ಮಾನನಲ್ಲ ಎಂಬ ಮಹತ್ವದ ಆಶಯವನ್ನು ಕೂಡ ಅವರು ಸಾರಿದರು.ಶರಾಬಿನ ಮತ್ತಿನಲ್ಲಿ ಎಲ್ಲಾ ಭಾವನೆಗಳನ್ನೂ ತೊರೆದು ಬಾಳುತ್ತಿದ್ದವರನ್ನು ಅದು ನಮಗೆ ಹೇಳಿದ್ದಲ್ಲ ಎಂದು ಹೇಳಿ ಅದರಿಂದ ಹೊರತಂದವರಾಗಿದ್ದಾರೆ ಪುಣ್ಯ ಪ್ರವಾದಿ ﷺ.ಅವರ ಜೀವನವು ಕೇವಲ ಒಂದು ಚರಿತ್ರೆ ಎನ್ನುವುದಕ್ಕಿಂತ ಎಲ್ಲಾ ಸಮುದಾಯದವರಿಗೂ ಸಮಾಜಕ್ಕೂ ಒಂದು ಕನ್ನಡಿಯಂತೆಯಾಗಿದೆ. ಅವರ ಸಮಾಜಿಕ ನಯಗಳು ಒಂದೊಂದೂ ಕೂಡ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ಈ ೧೫೦೦ ನೆಯ ಮಿಲಾದ್ ಉನ್ನಬಿ ಆಚರಣೆ ವೇಳೆಗೆ ತನ್ನ ಶತ್ರುಗಳನ್ನೂ ಕೂಡ ಕ್ಷಮಿಸಿದ ಆ ಮಹಾಮನೀಷಿ , ಚಕ್ರವರ್ತಿಯಾಗಿದ್ದರೂ ಕೂಡ ಮೆತ್ತಗಿನ ಹಾಸಿಗೆಯ ಬದಲು ತನ್ನ ಬೆನ್ನ ಮೇಲೆ ಬರೆಗಳು ಬರುವಂತಹ ಚಾಪೆಯಲ್ಲಿ ಮಲಗಿದ ಆ ವಿಶ್ವನಾಯಕ, ಎಲ್ಲಾ ತಲೆಮಾರಿಗೂ ಆದರ್ಶ ಪುರುಷರಾದ ಪ್ರವಾದಿ ﷺ ರವರ ಜೀವನ ಚರಿತ್ರೆಯನ್ನು ಕಲಿಯುವುದಲ್ಲದೇ ಅದನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಯತ್ನಿಸೋಣ…
-ಹಾಶಿರ್ ಅಬೂಬಕರ್



Post Comment