ಕರ್ನಾಟಕದ ಕಾಶ್ಮೀರವೆಂದೇ ಖ್ಯಾತವಾದ ಕಾಫಿಯ ತವರೂರು ಎಂದು ಗುರುತಿಸಲ್ಪಟ್ಟಿರುವ ಕೊಡಗು ಜಿಲ್ಲೆಯಲ್ಲಿ ಸಂಘಟನಾ ಕ್ರಾಂತಿಗೆ ಮುನ್ನುಡಿ ಬರೆದ ಎಡಪ್ಪಾಲ ಮಹ್‌ಮೂದ್ ಮುಸ್ಲಿಯಾರ್ ಕೊಡಗಿನ ಕ್ರಾಂತಿ ಪುರುಷ ಎಂದೇ ಚಿರಪರಿಚಿತರು. ಅಲ್ಲದೆ “ಎಡಪ್ಪಾಲ ಉಸ್ತಾದ್” ಎಂದೇ ಖ್ಯಾತರಾಗಿದ್ದರು.
1944ರ ಅಕ್ಟೋಬರ್ 15ರಂದು ಹಿರಿಯ ವಿದ್ವಾಂಸ ಕಿಕ್ಕರೆ ಅಬ್ದುಲ್ ಖಾದರ್ ಮಾಸ್ಟರ್-ಅಸ್ಮಾಅ್ ದಂಪತಿಯ ಪುತ್ರರಾಗಿ ಜನಿಸಿದ ಎಡಪ್ಪಾಲ ಮಹ್‌ಮೂದ್ ಮುಸ್ಲಿಯಾರ್ ತನ್ನ ಜೀವನದುದ್ದಕ್ಕೂ ಸಂಘಟನೆಗಾಗಿ ಅನೇಕ ರೀತಿಯ ಮಾನಸಿಕವಾಗಲೀ ಮತ್ತು ಆರ್ಥಿಕವಾಗಲೀ ಕಷ್ಟವನ್ನು ಅನುಭವಿಸಿದೆ. ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್‌ನ ಸಹಾಯಕ ಖಾಝಿಯಾಗಿ, ಕರ್ನಾಟಕ ಜಂಇಯತುಲ್ ಉಲಮಾದ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಾಥಮಿಕ ಶಿಕ್ಷಣವನ್ನು ತಾಯಿಯ ತವರೂರಾದ ಕುಪ್ಪಾದಲ್ಲಿ ಮುಗಿಸಿದರು. ನಂತರ ಧಾರ್ಮಿಕ ಶಿಕ್ಷಣದ ಕಡೆಗೆ ತಲೆ ಹಾಕಿದ ಎಡಪ್ಪಾಲ ಉಸ್ತಾದ್‌ರು ಕೊಡಗಿನ ಕೊಂಡಗೇರಿ,ಹಾಗೂ ತಳಿಪರಂಬುವಿನ ತಿರುವಟ್ಟೂರು ಮತ್ತು ಕಣ್ಣೂರು ಜಿಲ್ಲೆಯ ಕಾಂಬದಾರ್ ಎಂಬಲ್ಲಿ ವಿದ್ಯಾಭ್ಯಾಸ ಪಡೆದರು. ಸಿ.ಪಿ. ಮುಹಮ್ಮದ್ ಕುಟ್ಟಿ ಮುಸ್ಲಿಯಾರ್,ಎನ್. ಅಬ್ದುಲ್ಲ ಮುಸ್ಲಿಯಾರ್, ಅವರಾಂ ಕುಟ್ಟಿ ಮುಸ್ಲಿಯಾರ್, ಇಬ್ರಾಹೀಂ ಕುಟ್ಟಿ ಮುಸ್ಲಿಯಾರ್ ಕಾಪಾಡ್ ಮುಂತಾದ ವಿದ್ವಾಂಸರಿಂದ ಧಾರ್ಮಿಕ ಶಿಕ್ಷಣವನ್ನು ಪಡೆದರು.
1963ರಿಂದ ಸಾರ್ವಜನಿಕ ರಂಗಕ್ಕೆ ಕಾಲಿಟ್ಟ ಎಡಪ್ಪಾಲ ಉಸ್ತಾದರು ನಾಪೊಕ್ಲು, ಎಡಪ್ಪಾಲ, ಮೂರ್ನಾಡ್, ವಿರಾಜಪೇಟೆ, ಎಮ್ಮೆಮಾಡು,ಕುಂಜಿಲ, ಮೈಸೂರು ಮುಂತಾದ ಕಡೆ ಖತೀಬ್ ಹಾಗೂ ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದರು.ಕೊಡಗು ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಈಗಲೂ ಸಮರ್ಪಕ ಬಸ್ ಸಾರಿಗೆಯ ವ್ಯವಸ್ಥೆಯಿರಲಿಲ್ಲ.ಓಡಾಡಲು ಬಸ್ ಸೌಕರ್ಯವಿಲ್ಲದ ಆ ಕಾಲದಲ್ಲಿ ಅಂದರೆ 1968-69ರಲ್ಲಿ ಕೊಡಗಿನ ಖತೀಬರನ್ನು ಒಟ್ಟು ಸೇರಿಸಿ “ಜಂಇಯತುಲ್ ಖುತಬಾಅ್” ಎಂಬ ಸಂಘಟನೆಗೆ ರೂಪು ಕೊಡುವ ಮೂಲಕ ಕೊಡಗಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಘಟನೆಗೆ ಮುನ್ನುಡಿ ಬರೆದ ಕೀರ್ತಿ ಪಟ್ಟ ಎಡಪ್ಪಾಲ ಉಸ್ತಾದ್‌ರಿಗೆ ಸಲ್ಲುತ್ತದೆ.ಅದೇ ರೀತಿಯಲ್ಲಿ 1969-70ರಲ್ಲಿ ಊರಿನ ಪ್ರಮುಖ ಉಮರಾ ನೇತಾರರನ್ನು ಒಗ್ಗೂಡಿಸಿ “ಕೂರ್ಗ್ ಮುಸ್ಲಿಂ ಅಸೋಸಿಯೇಶನ್’ಗೆ ರೂಪು ನೀಡಿದರು. ಮೈಸೂರಿನಲ್ಲಿ ಕೇರಳ ಜಮಾಅತ್‌ನ ಖತೀಬರಾಗಿದ್ದಾಗ ಗೌಸಿಯಾ ನಗರ ಕೇಂದ್ರೀಕರಿಸಿ “ನೂರುಲ್ ಇಸ್ಲಾಂ ಸಭಾ” ಎಂಬ ಸಂಘಟನೆಗೆ ರೂಪು ನೀಡಿ ಅದರ ಅಧೀನದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ, ಶಾಫಿ-ಹನಫಿ ಮದ್ರಸಗಳನ್ನು ಕಟ್ಟಿ ಅಭಿವೃದ್ಧಿಪಡಿಸಿದ್ದರು. ಕೆಲವು ಸಮಯದ ಬಳಿಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ ಅದನ್ನು ಹಸ್ತಾಂತರಿಸಿ ಕೊಡಗಿನತ್ತ ಮುಖ ಮಾಡಿದರು. ಹಂಝ ಹಾಜಿಯ ಹೆಸರಲ್ಲಿ ಅವರ ಕುಟುಂಬಸ್ಥರು ದಾನವಾಗಿ ನೀಡಿದ ಕೊಟ್ಟುಮುಡಿಯ ಹೃದಯ ಭಾಗದಲ್ಲಿ “ಮರ್ಕಝುಲ್ ಹಿದಾಯ ಎಜುಕೇಶನಲ್ ಸೆಂಟರ್”ಗೆ ರೂಪು ನೀಡಲು ವಿವಿಧ ನಾಯಕರನ್ನು ಭೇಟಿಯಾಗಿ ಕೊಡಗಿನವರ ಕನಸನ್ನು ನನಸು ಮಾಡುವಲ್ಲಿ ಎಡಪ್ಪಾಲ ಉಸ್ತಾದ್‌ರ ತ್ಯಾಗ-ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಕೊಡಗು ಜಂಇಯತುಲ್ ಉಲಮಾದ ಅಧ್ಯಕ್ಷರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ್ದ ಎಡಪ್ಪಾಲ ಉಸ್ತಾದ್‌ರು ಅನೇಕ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ರಾಜಿ ಪಂಚಾಯತಿ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು. ಹಲವು ಸಂಕೀರ್ಣ ಸಮಸ್ಯೆಗಳಿಗೆ ಕೊಡಗಿನ ಜನರು ಉಸ್ತಾದರನ್ನು ಪರಿಹಾರ ರೂಪವಾಗಿ ದರ್ಶಿಸುತ್ತಿದ್ದರು. ಅತ್ಯಂತ ಸೌಮ್ಯ ಸ್ವಭಾವದ ಎಡಪ್ಪಾಲ ಉಸ್ತಾದರು ಯಾರೇ ತನ್ನ ಬಳಿಗೆ ಬಂದರೂ ನಗು ಮುಖದಿಂದ ಅವರನ್ನು ಹಾರೈಸಿ ಬೀಳ್ಕೂಡುತ್ತಿದ್ದರು.
1966ರಲ್ಲಿ ಎಡಪ್ಪಾಲ ಕುರಿಕಾಡೆ ಹಸನ್ ಎಂಬವರ ಪುತ್ರಿ ಫಾತಿಮಾ ಅವರನ್ನು ವಿವಾಹವಾದ ಉಸ್ತಾದರಿಗೆ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದಾರೆ. ಎಡಪ್ಪಾಲದ ಕಿಕ್ಕರೆ ಎಂಬಲ್ಲಿ ವಾಸವಾಗಿದ್ದ ಉಸ್ತಾದರು 2021ರ ಸೆಪ್ಟಂಬರ್ 17ರಂದು ನಿಧನರಾದರು.
ಉಸ್ತಾದರೊಂದಿಗೆ ನಮ್ಮನ್ನೂ ಕೂಡ ಸರ್ವಶಕ್ತನು ಜನ್ನಾತುಲ್ ಫಿರ್ದೌಸಲ್ಲಿ ಒಟ್ಟುಗೂಡಿಸಲಿ ಎಂದು ಪ್ರಾರ್ಥಿಸುತ್ತೇನೆ…..
-ತಬ್ಶೀರ್ ಕುಂಜಿಲ

Post Comment